ಕಾಡು ಪಿಂಡಿ

ಮಿರಿಸ್ಟಿಕೇಸೀ ಕುಟುಂಬಕ್ಕೆ ಸೇರಿದ ಸುಗಂಧಪೂರಿತವಾದ ನಿತ್ಯಹರಿದ್ವರ್ಣದ ಮರ. ಇದರ ವೈಜ್ಞಾನಿಕ ನಾಮ ನೀಮ ಅಟೆನ್ಯುಯೇಟ. ರಕ್ತ ಮರ ಅಥವಾ ಹೆಡಗ್ಗಲ್ ಎಂದೂ ಕರೆಯುವುದುಂಟು. ಇದು ಸುಮಾರು 20' ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ 3,000' ಗಳಷ್ಟು ಎತ್ತರದ ಪ್ರದೇಶಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿದೆ. ಎಲೆಗಳು ನೀಳವಾಗಿವೆ. ಅವುಗಳ ತುದಿ ಚೂಪು. ಹೂಗೊಂಚಲು ಸೋಕೀರ್ಣ (ಪ್ಯಾನಿಕಲ್) ಮಾದರಿಯದು. ಹೂಗೊಂಚಲಿನ ಮೇಲೆ ರೋಮಗಳಿವೆ. ಹೂಗಳು ಭಿನ್ನಲಿಂಗಿಗಳು. ಒಂದೊಂದು ಹೂವಿನಲ್ಲೂ 3 ಹಾಲೆಗಳುಳ್ಳ ಪೆರಿಯಾಂತ್ ಭಾಗವಿದೆ. ಗಂಡುಹೂವಿನಲ್ಲಿ 8-20 ಕೇಸರಗಳೂ ಹೆಣ್ಣು ಹೂವಿನಲ್ಲಿ ಒಂದೇ ಕಾರ್ಪೆಲ್ಲುಳ್ಳ ಉಚ್ಚಸ್ಥಾನದ ಅಂಡಾಶಯವೂ ಇವೆ. ಅಂಡಕೋಶದೊಳಗೆ ಒಂದೇ ಅಂಡಕವಿದೆ. ಫಲ ರಸಭರಿತವಾಗಿದೆ. ಬೀಜದ ಮೇಲೆ ಕಡುಗೆಂಪು ಬಣ್ಣದ ಏರಿಲ್ ಎಂಬ ಹೊದಿಕೆಯಿದೆ. ಕಾಡು ಪಿಂಡಿಯ ಚೌಬೀನೆ ಎಳೆಯದರಲ್ಲಿ ಮಾಸಲು ಕೆಂಪುಬಣ್ಣವಾಗಿದ್ದು ವಯಸ್ಸಾದಂತೆ ನಸುಕಂದು ಬಣ್ಣಕ್ಕೆ ತಿರುಗುತ್ತದೆ. ಅಲ್ಲಲ್ಲೆ ಕಂದುಗೆರೆಗಳು ಮತ್ತು ಮಚ್ಚೆಗಳು ಇವೆ. ಬಿಸಿಲು ಮತ್ತು ಮಳೆಯ ಸಂಪರ್ಕದಿಂದ ದೂರವಿರಿಸಿದ ಚೌಬೀನೆ ಗಟ್ಟಿಯಾಗಿಯೂ ಹಗುರವಾಗಿಯೂ ಇರುತ್ತದೆ. ಆದರೆ ಕ್ರಿಮಿಕೀಟಗಳು ಬಾಧೆಗೆ ಬೇಗನೆ ಒಳಗಾಗುತ್ತದೆ. ಗರಗಸದಿಂದ ಕೊಯ್ಯಲೂ ಹೊಳಪು ಕೊಡಲೂ ಸುಲಭ. ಮೇಲಿನ ಗುಣಗಳಿಂದಾಗಿ ಎಲ್ಲ ತರದ ಉಪಯೋಗಕ್ಕೂ ಬರುತ್ತದೆ. ಇದರಿಂದ ಪೆಟ್ಟಿಗೆ, ಹಲಗೆ, ಬೆಂಕಿಪೆಟ್ಟಿಗೆ, ಮೊದಲಾದವನ್ನು ತಯಾರಿಸಬಹುದು, ಬೀಜಗಳಿಂದ ಒಂದು ಬಗೆಯ ಎಣ್ಣೆ ತೆಗೆಯುತ್ತಾರೆ. 

 

(ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ